ಫಿಶ್‍ಮನ್, ಜಾಷುವ ಎ
1926. ಭಾಷಾವಿಜ್ಞಾನಿ. ಹುಟ್ಟಿದ್ದು ಫಿಲಿಡೆಲ್ಫಿಯದಲ್ಲಿ. ಇವರು ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದಿಂದ ಬಿ.ಎಸ್. ಮತ್ತು ಎಂ. ಎಸ್. ಪದವಿಗಳನ್ನೂ, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನೂ ಪಡೆದರು.

	1958ರಲ್ಲಿ ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದಲ್ಲಿ ಮಾನವ ಸಂಬಂಧಗಳು ಮತ್ತು ಮನಶ್ಶಾಸ್ತ್ರ ವಿಭಾಗಕ್ಕೆ ಉಪ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅಲ್ಲದೆ ಅಲ್ಲಿನ ಎ. ಎಮ್ ಗ್ರೀನ್ ಫೀಲ್ಡ್ ಸೆಂಟರ್ ಫಾರ್ ಹ್ಯುಮನ್ ರಿಲೇಷನ್ಸ್ ಎಂಬ ಸಂಸ್ಥೆಯ ಸಂಶೋಧಕ ನಿರ್ದೇಶಕರೂ ಆದರು. 1960ರಲ್ಲಿ ಯಶಿವಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಸಮಾಜಶಾಸ್ತ್ರ ಮತ್ತು ಮನಶ್ಶಾಸ್ತ್ರ ವಿಭಾಗಗಳ ಪ್ರಾಧ್ಯಾಪಕ ಹುದ್ದೆ ಸ್ವೀಕರಿಸಿದರು. ಜೊತೆಗೆ ಫಕ್ಯೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹ್ಯುಮಾನಿಟೀಸ್ ಅಂಡ್ ಸೋಷಿಯಲ್ ಸೈನ್ಸ್‍ನ ಕ್ಷೇಮಪಾಲರೂ ಆದರು.

	ಫಿಶ್‍ಮನ್ ಅವರಿಗೆ ಬಾಲ್ಯದಿಂದಲೇ ಭಾಷೆಯ ಅಧ್ಯಯನದ ಬಗೆಗೆ ವಿಶೇಷ ಒಲವು. ಸಮಾಜಶಾಸ್ತ್ರ, ಮನಶ್ಶಾಸ್ತ್ರ, ಇತಿಹಾಸ, ತತ್ತ್ವಶಾಸ್ತ್ರ ಮುಂತಾದ ವಿಷಯಗಳಲ್ಲಿ ಪರಿಣತಿ ಪಡೆದ ಅನಂತರ ಭಾಷೆಯನ್ನು ವಿವಿಧ ದೃಷ್ಟಿಕೋನಗಳಿಂದ ಪರಿಶೀಲಿಸುವ ಸಾಮಥ್ರ್ಯಗಳಿಸಿದರು.

	ಇವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿರುವಾಗಲೇ ಸಾಮಾಜಿಕ ಭಾಷಾ ವಿಜ್ಞಾನದ ಬಗೆಗಿನ ಆರಂಭದ ಲೇಖನಗಳನ್ನು ಪ್ರಕಟಿಸಿದರು (1958-59). ಇದಕ್ಕೆ ಮುಖ್ಯ ಪ್ರೇರಣೆ ಎಂದರೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಜನಗಣತಿಯ ಪ್ರಶ್ನಾವಳಿ. ಅಮೆರಿಕಾದಲ್ಲಿರುವ ವಿವಿಧ ಜನಾಂಗ ಮತ್ತು ಧರ್ಮಗಳನ್ನು ಪ್ರತಿನಿಧಿಸುತ್ತಿರುವ ಇಂಗ್ಲಿಷೇತರ ಭಾಷೆಗಳ ನೆಲೆಬೆಲೆಯನ್ನು ಕಂಡುಹಿಡಿಯುವಲ್ಲಿ ಭಾಷಾಸಾಮಗ್ರಿ ಸಂಗ್ರಹಣೆಯ ಪ್ರಾಮುಖ್ಯತೆಯನ್ನು ಮೊದಲ ಬಾರಿಗೆ ಕಂಡುಕೊಂಡರು. ಈ ದಿಶೆಯಲ್ಲಿ ಅಭಿರುಚಿಯುಳ್ಳ ಸಂಶೋಧಕರನ್ನು ಒಟ್ಟುಗೂಡಿಸಿ ಒಂದು ಯೋಜನೆಯನ್ನು ರೂಪಿಸಿ, ಆ ಮೂಲಕ ಸಂಕೀರ್ಣ ವರದಿಗಳನ್ನು ತಯಾರಿಸಿದರು. ಈ ವರದಿ ಸಾಮಾಜಿಕ ವಿಜ್ಞಾನಿಗಳಿಗೆ ಪ್ರಮುಖ ಸಿದ್ಧಾಂತಗಳು ಮತ್ತು ವಿಧಾನಗಳನ್ನು ಒದಗಿಸುವುದರ ಜೊತೆಗೆ ರಾಷ್ಟ್ರಮಟ್ಟದಲ್ಲಿ ಸರ್ಕಾರ ಅನುಸರಿಸಬಹುದಾದ ಮಾದರಿಯನ್ನು ತೋರಿಸಿ ಕೊಟ್ಟಿತು.

	ಮುಂದೆ ಇವರು ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಉನ್ನತ ವ್ಯಾಸಂಗಕ್ಕೆ ಹೋದಾಗ ತಮ್ಮ ಸಂಶೋಧನೆಗಳನ್ನು ವಿಸ್ತøತಗೊಳಿಸಿ, ಲಾಂಗ್ವೇಜ್ ಲಾಯಲ್ಟಿ ಇನ್ ದಿ ಯುನೈಟೆಡ್ ಸ್ಟೇಟ್ಸ್ ಎಂಬ ಕೃತಿ ಪ್ರಕಟಿಸಿದರು (1966). ದ್ವಿಭಾಷಾ ಸಂದರ್ಭವನ್ನು ವಿವರಿಸಲು ಮತ್ತು ಅದರ ಪರಿಮಾಣವನ್ನು ಕಂಡುಹಿಡಿಯಲು ಒಂದು ಹೊಸ ಸಂಕೀರ್ಣ ಸಾಮಾಜಿಕ ದೃಷ್ಟಿಕೋಣವನ್ನು ರೂಪಿಸಿದರು. ಸ್ಪ್ಯಾನಿಷ್ ಭಾಷಾ ಪಂಗಡಕ್ಕೆ ಸೇರಿದ ಪುಯೆರ್ಟೊ ಭಾಷೆಯ ರಿಕನ್‍ನ್ನು ಆಯ್ದುಕೊಂಡು ಸಮಾಜದ ದ್ವಿಭಾಷಿತ್ವದ ಪ್ರಕ್ರಿಯೆ ಮತ್ತು ಅದರ ವಿವಿಧ ಸಂಬಂಧಗಳನ್ನು ಆಳವಾಗಿ ಪರಿಶೀಲಿಸಿದರು. ಕ್ರಮೇಣ ಈ ಅಧ್ಯಯನವೇ ಪದವಿ ತರಬೇತಿ ಕಾರ್ಯಕ್ರಮಗಳ ಒಂದು ಅಂಗವಾಯಿತು. ರಾಬರ್ಟ್ ಎಲ್ ಕೂಪರ್ ಮತ್ತು ಇತರರೊಂದಿಗೆ ಅಮೆರಿಕಾದ ಶಿಕ್ಷಣ ಕಛೇರಿಗಾಗಿ ಇಂಥ ಎರಡು ಸಂಪುಟಗಳನ್ನು ವರದಿರೂಪದಲ್ಲಿ (1968ರಲ್ಲಿ) ಹೊರತಂದರು. 1971ರಲ್ಲಿ ಪ್ರಕಟಗೊಂಡ ಬೈಲಿಂಗ್ವಲಿಸಮ್ ಇನ್ ದಿ ಬರಿಯೊ ಎಂಬುದು ಇಂಥ ಒಂದು ಉತ್ಕøಷ್ಟ ಯತ್ನ. ಇವರು ಹವಾಯ್ ವಿಶ್ವವಿದ್ಯಾಲಯದ ಈಸ್ಟ್ ವೆಸ್ಟ್ ಸೆಂಟರ್ ನ ಹಿರಿಯತಜ್ಞರಾಗಿದ್ದಾಗ ಭಾಷೆಯೋಜನೆಯ ಪ್ರಕ್ರಿಯೆ ಮತ್ತು ಅದರ ಇತರ ಸಂಬಂಧಗಳನ್ನು ಪರಿಶೀಲಿಸುವ ಒಂದು ಪ್ರಯತ್ನವನ್ನು ನಡೆಸಿ ಲಾಂಗ್ವೇಜ್ ಅಂಡ್ ನ್ಯಾಷನಾಲಿಸಮ್ ಎಂಬ ಕೃತಿಯನ್ನು ಪ್ರಕಟಿಸಿದರು (1972). ಇದರಲ್ಲಿ ಭಾಷಾ ಯೋಜನೆಯನ್ನು ಕುರಿತು ಸಾಮಾಜಿಕ, ಐತಿಹಾಸಿಕ ಮತ್ತು ಅಂತರರಾಷ್ಟ್ರೀಯ ದೃಷ್ಟಿಗಳಿಂದ ಚರ್ಚಿಸಲಾಗಿದೆ.

	ಇವರ ಪ್ರಕಟಿತ ಕೃತಿಗಳಲ್ಲಿ ಮುಖ್ಯವಾದವು: ರೀಡಿಂಗ್ಸ್ ಇನ್ ದಿ ಸೋಷಿüಯಾಲಜಿ ಆಫ್ ಲಾಂಗ್ವೇಜ್ (1968), ಸೋಷಿಯೋಲಿಂಗ್ವಿಸ್ಟಿಕ್ಸ್: ಎ ಬ್ರೀಫ್ ಇನ್ಟ್ರೊಡಕ್ಷನ್ (1970), ಅಡ್ವಾನ್ಸಸ್ ಇನ್ ದಿ ಸೋಷಿಯಾಲಜಿ ಆಫ್ ಲಾಂಗ್‍ವೇಜ್ (1971-72) ಮತ್ತು ದಿ ಸೋಷಿಯಾಲಜಿ ಆಫ್ ಲಾಂಗ್‍ವೇಜ್ (1972). ಇವೇ ಅಲ್ಲದೆ ಸುಮಾರು 163 ವಿವಿಧ ಬಗೆಯ ಲೇಖನಗಳನ್ನು ಬರೆದಿದ್ದಾರೆ. ಭಾಷೆಯನ್ನು ಅದರ ಸಾಮಾಜಿಕ ಹಾಗೂ ಸಾಂಸ್ಕøತಿಕ ಪರಿಸರದಲ್ಲಿ ಅಧ್ಯಯನ ಮಾಡಲು ಇವರು ಬಳಸಿಕೊಂಡ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಹಿತಿಗಳು ಸಾಮಾಜಿಕ ಭಾಷಾವಿಜ್ಞಾನಕ್ಕೆ ಇವರಿಂದ ಸಂದ ಅಪೂರ್ವ ಕೊಡುಗೆಗಳಾಗಿವೆ. 
(ಎಸ್.ಜಿ.)